ಕನ್ನಡಿಗರ ತಾಯೆ ಪದ್ಯದ ಪೂರ್ಣ ಪಾಠ

ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ!
ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ!

ನಮ್ಮ ತಪ್ಪನೆನಿತೋ ತಾಳ್ವೆ,
ಅಕ್ಕರೆಯಿಂದೆಮ್ಮನಾಳ್ವೆ;
ನೀನೆ ಕಣಾ ನಮ್ಮ ಬಾಳ್ವೆ,
ನಿನ್ನಕರೆಯಲಮ್ಮೆವು!
ತನು ಕನ್ನಡ, ಮನ ಕನ್ನಡ, ನುಡಿ ಕನ್ನಡೆಮ್ಮವು.
ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,
ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,
ತೆನೆಯ ಕೆನೆಯ ಗಾಳಿಯೊ.
ಖಗಮೃಗೋರಗಾಳಿಯೊ,
ನದಿನಗರನಗಾಳಿಯೊ!
ಇಲ್ಲಿಲ್ಲದುದುಳಿದುದೆ?
ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ?
ಬುಗರಿಯೀಯೆ ಶಬರಿ ಕಾಯೆ ರಾಮನಿಲ್ಲಿ ಬಂದನೆ?
ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ?
ಪಾಂಡವರಜ್ಞಾತಮಿದ್ದ,
ವಲಲಂ ಕೀಚಕನ ಗೆದ್ದ,
ಕುರುಕುಲು ಮುಂಗದನಮೆದ್ದ
ನಾಡು ನೋಡಿದಲ್ಲವೆ?
ನಂದನಂದನನಿಲ್ಲಿಂದ ಸಂದಿಗಯ್ದನಲ್ಲವೆ?
ಶಕವಿಜೇತನಮರ ಶಾತವಾಹನಾಖ್ಯನೀ ಶಕಂ
ನಿನ್ನೊಳಂದು ತೊಡಗಿ ಸಂದುದರ್ಧ ಭತದೇಶಕಂ!
ಚಾಳುಕ್ಯ ರಾಷ್ಟ್ರಕೂಟರೆಲ್ಲಿ,
ಗಂಗರಾ ಕದಂಬರೆಲ್ಲಿ,
ಹೊಯ್ಸಳ ಕಳಚುರ್ಯರೆಲ್ಲಿ,
ವಿಜಯನಗರ ಭೂಪರು
ಆಳ್ದರಿಲ್ಲಿಯಲ್ಲದೆಲ್ಲಿ ತಾಯೆ ಮೇಣಲೂಪರು?
ಜೈನರಾದ ಪೂಜ್ಯಪಾದ ಕೊಂಡಕುಂದ ವರ್ಯರ,
ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,
ಶರ್ವ ಪಂಪ ರನ್ನರ,
ಲಕ್ಷೀಪತಿ ಜನ್ನರ,
ಷಡಕ್ಷರಿ ಮುದ್ದಣ್ಣರ,
ಪುರಂದರ ವರೇಣ್ಯರ,
ತಾಯೆ, ನಿನ್ನ ಬಸಿರೆ ಹೊನ್ನ ಗನಿ ವಿದ್ಯಾರಣ್ಯರ!
ಹಳೆಯ ಬೀಡ ಬೆಲನಾಡ ಮಾಡಮೆನಿತೊ ಸುಂದರಂ!
ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!
ಇಲ್ಲಿಲ್ಲದ ಶಿಲ್ಪಮಿಲ್ಲ;
ನಿನ್ನ ಕಲ್ಲೆ ನುಡಿವುದಲ್ಲ!
ಹಿಂಗತೆಯಿನಿವಾಲ ಸೊಲ್ಲ
ನೆಮ್ಮತೃಷೆಗೆ ದಕ್ಕಿಸು!
ಹೊಸಲು ಕಿನ್ನರಿಯಲಿ ನಿನ್ನ ಹಳೆಯ ಹಾಡನುಕ್ಕಿಸು!
ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ
ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ!
ಕನ್ನಡ ಕಸ್ತೂರಿಯನ್ನ
ಹೊಸತುಸಿರಿಂ ತೀಡದನ್ನ
ಸುರಭಿ ಎಲ್ಲಿ? ನೀನದನ್ನ
ನವಶಕ್ತಿಯನೆಬ್ಬಿಸು-
ಹೊಸ ಸುಗಂಧದೊಸಗೆಯಿಂದ ಜಗದಿ ಹೆಸರ ಹಬ್ಬಿಸು!
ನಿನ್ನ ಪಡೆಯ ಕತೆಯ ಕಡೆಯ ನುಡಿಯೆ ತಾಳಿಕೋಟೆಯು?
ಕಡಲಿನೊರತೆಗೊಳವೆ ಕೊರತೆ? ಬತ್ತದು ನಿನ್ನೂಟೆಯು!
ಸೋಲ ಗೆಲ್ಲವಾರಿಗಿಲ್ಲ?
ಸೋತು ನೀನೆ ಗೆದ್ದೆಯಲ್ಲ?
ನಿನ್ನನಳಿವು ತಟ್ಟಲೊಲ್ಲ!
ತಾಳಿಕೋಟೆ ಸಾಸಿರಂ
ಬಾಹುಬಲದಿ ಮನೋಬಲದಿ ತಾಯೆ ಗೆಲುವೆ ಭಾಸುರಂ!
ಕುಗ್ಗದಂತೆ ಹಿಗ್ಗಿಪಂತೆ ನಿನ್ನ ಹೆಸರ ಟೆಕ್ಕೆಯಂ,
ನೀಗದಂತೆ ಸಾಗಿಪಂತೆ ನಿನ್ನ ನುಡಿಯ ಢಕ್ಕೆಯಂ,
ಆರ್ಯರಿಲ್ಲಿ ಬಾರದಲ್ಲಿ ಬಾಸೆ ಎಲ್ಲಿ ಸಕ್ಕದಂ?
ನಿನ್ನ ನುಡಿಯಿನಚ್ಚುಪಡಿಯನಾಂತರೆನಿತೊ ತಕ್ಕುದಂ!
ಎನಿತೊ ಹಳೆಯ ಕಾಲದಿಂದ
ಬರ್ದಿಲಮೀ ಬಾಸೆಯಿಂದ
ಕಾಲನ ಮೂದಲಿಸಿ ನಿಂದ
ನಿನಗೆ ಮರೆವೆ ಹೊದೆವುದೆ?
ನಿನ್ನ ನುಡಿಗೆ ನಿನ್ನ ನಡೆಗೆ ಮುದುಪುಮೆಂದು ಮೊದವುದೆ?
ನಮ್ಮೆದೆಯಂ ತಾಯೆ ಬಲಿಸು,
ಎಲ್ಲರ ಬಾಯಲ್ಲಿ ನೆಲಸು,
ನಮ್ಮ ಮನಮನೊಂದೆ ಕಲಸು!
ಇದನೊಂದನೆ ಕೋರುವೆ!
ನಿನ್ನ ಮೂರ್ತಿ ಜಗತ್ಕೀರ್ತಿ ಎಂದೆಗೆಮಗೆ ತೋರುವೆ?

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಮತಿ ನೇಮಿಚಂದ್ರ ರ ಪರಿಚಯ

ಭಾಷಾ ಕೌಶಲಗಳು

ಸು.ರಂ. ಎಕ್ಕುಂಡಿ ಕವಿ ಪರಿಚಯ